Jan 10, 2013

ಜಪಾನಿನಾನುಭವ - 4


ನನ್ನ ಜಪಾನ್ ಭೇಟಿಯ ಅನುಭವ ನಿಜವಾಗಲೂ ಮರೆಯಲಾಗದ್ದು ಹಾಗೂ ಅವಾಗವಾಗ ನೆನಪಿಸಿಕೊಳ್ಳಬೇಕಾದ್ದು . ಈ ಸಲ ಹೋದಾಗ ಆದ ಒಂದು ಅನುಭವ ನನ್ನನ್ನು ಒಂದು ಕ್ಷಣ ತಲ್ಲಣಗೊಳಿಸಿತ್ತು.

ಅಂದು ಬಹುಶಃ ಮೇ 9 ಅಥವಾ 10 ಇರಬಹುದು (ಇಸವಿ 2012). ಬೆಳಗ್ಗೆ 6.30 ಯ ಸುಮಾರಿಗೆ ಉತ್ಥಾನವಾಯ್ತು. ಮುಖ ತೊಳೆದು-ಹಲ್ಲುಜ್ಜಲು ಸಿಂಕ್ ಬಳಿ ಬಂದೆ. ಆಗ ತಾನೇ ಎದ್ದಿದ್ದ ನನಗೆ ಪೂರ್ತಿಯಾಗಿ ಕಣ್ಣು ಬಿಡಲು ಕಷ್ಟಪಡುತ್ತಿದ್ದೆ. ಸೂರ್ಯ ಹುಟ್ಟಿದ ಮೇಲೆಯೇ 'ಒಳ್ಳೆಯ' ನಿದ್ದೆ ಮಾಡುವ ದುರಭ್ಯಾಸದವನಾದ ನಾನು ಜಪಾನಿನಲ್ಲಿ ಬೆಳಗ್ಗೆ 7 ರ ಒಳಗೆ ಏಳುವ ಅಭ್ಯಾಸ ಮಾಡಿಕೊಂಡಿದ್ದರೂ ಪ್ರತಿದಿನ ಬೇಗ ಏಳುವ ಪ್ರಯಾಸ ಇದ್ದೇ ಇತ್ತು. ಅಷ್ಟು ಬೇಗ ಏಳುವ ಅಭ್ಯಾಸ ಜಪಾನಿಗೆ ಮಾತ್ರ ಸೀಮಿತವಾಗಿದ್ದು ವಿಪರ್ಯಾಸ.

ಸಿಂಕ್ ಬಳಿ ಇದ್ದ ಗಾಜಿನ ಲೋಟವನ್ನು ಕೈಗೆ ತೆಗೆದುಕೊಂಡು ಇನ್ನೇನು ಅದರಲ್ಲಿ ನೀರು ತುಂಬಿ ನನ್ನ ಬ್ರಶ್ ಅನ್ನು ತೊಳೆದುಕೊಳ್ಳುವಷ್ಟರಲ್ಲಿ ಕೈನಿಂದ ಲೋಟ ಜಾರಿ ಸಿಂಕ್ ಗೆ ಬಿತ್ತು. ಸಾಕಷ್ಟು ಭಾರವಿದ್ದ ಆ 'ಖಾಲಿ' ಲೋಟ ಸಿಂಕನ್ನು ಸೀಳಿಕೊಂಡು ನೆಲಕ್ಕೆ ಬಿತ್ತು. ಲೋಟ ಬಿದ್ದ ಜಾಗದಲ್ಲಿ 'ಮಾತ್ರ' ನೆಲ ಕಾಣುತ್ತಿತ್ತು. ಆ ಭಯಕ್ಕೆ ನನಗೆ ಪೂರ್ತಿ ಎಚ್ಚರವಾಯಿತು !  ಬರುವ ಖರ್ಚಿನ ಬಗ್ಗೆ ಯೋಚಿಸುತ್ತ ತಲೆ ಗಿರಾಕಿ ಹೊಡೆಯಲಾರಂಭಿಸಿತು. ಯಾವ ಕಾರಣದಿಂದಲೂ ಕಟ್ಟಬೇಕಾದ 'ತೆರಿಗೆ'ಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಮತ್ತು ಜಾಗದಲ್ಲಿ ನಾನಿದ್ದೆ.  ತುಂಬಾ ಯೋಚಿಸದೆ ತಕ್ಷಣ ನಾನಿದ್ದ ಅಪಾರ್ಟ್ಮೆಂಟ್ ನ ಅಧಿಕಾರಿಗೆ ಮೇಲ್ ಮಾಡಿ ತಿಳಿಸಿದೆ. ಏನೋ, 10 ರಿಂದ 15000 ಯೆನ್ ಗಳಗಾಬಹುದು, ಪರವಾಗಿಲ್ಲ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು ಆಫೀಸ್ ಗೆ ಹೋದೆ. ಆಫೀಸ್ ಗೆ ಹೋಗುವಷ್ಟರಲ್ಲಿ ನನ್ನ ಮೇಲ್ ಗೆ ಉತ್ತರ ಬಂದಿತ್ತು, 'ನಿಮ್ಮ ಮನೆಯನ್ನು ಪ್ರವೇಶಿಸಿ ಆಗಿರುವ ನಷ್ಟದ ಬಗ್ಗೆ ಹಾಗು ಅದಕ್ಕೆ ತಗುಲುವ ವೆಚ್ಚದ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ತಿಳಿಸುತ್ತೇವೆ. ನೀವಿಲ್ಲದಿರುವ ಸಮಯದಲ್ಲಿ ನಿಮ್ಮ ಮನೆಯನ್ನು ಪ್ರವೇಶಿಸಲು ನಿಮ್ಮ ಅಭ್ಯಂತರವಿದೆಯಾ?' ಎನ್ನುವ ಮೇಲ್ ಗೆ ನಾನು 'ನನ್ನ ಅಭ್ಯಂತರವಿಲ್ಲ' ಎಂದು ಉತ್ತರಿಸಿ ಸುಮ್ಮನಾದೆ.

ಎರಡು ದಿನಗಳ ನಂತರ ಬಂದ ಮೇಲ್ ಅನ್ನು ನೋಡಿ ಆದ ಶಾಕ್ ಇದೆಯಲ್ಲ ಅದು ನನ್ನನ್ನು ಈಗಲೂ ಒಮ್ಮೊಮ್ಮೆ ಕಾಡುತ್ತದೆ. 'ತಮ್ಮಿಂದ ಆದ ನಷ್ಟದ ಕಾರಣಕ್ಕೆ ಅದಕ್ಕೆ ತಗುಲುವ ವೆಚ್ಚದ ಬಗ್ಗೆ ನಮ್ಮ ಪ್ರತಿನಿಧಿಯಿಂದ ಮಾಹಿತಿ ಬಂದಿದೆ. ಹಾಳಾದ ಸಿಂಕ್ ಅನ್ನು ರಿಪೇರಿ ಮಾಡಲಾಗದ ಕಾರಣಕ್ಕೆ ಅದನ್ನು ಪೂರ್ಣ ಬದಲಾಯಿಸುವ ಅವಶ್ಯಕತೆ ಇದೆ. ಆದ್ದರಿಂದ ಎಲ್ಲ ಸೇರಿ ತಗುಲುವ ಅಂದಾಜು ವೆಚ್ಚ 48000 ಯೆನ್ ಗಳಾಗುತ್ತವೆ. ಆ ಕುರಿತಾದ  ರಸೀದಿಯು ನಾಳೆ ನಿಮ್ಮ ಕೈ ಸೇರಲಿದೆ. ದಯವಿಟ್ಟು ಪಾವತಿಸಿ' ಎಂದು ಬರೆದ ಮೇಲ್, ವಾಪಸ್ ಬರುವ ತನಕ ನನ್ನ ಮನಸ್ಸನ್ನು ಕೊರೆದದ್ದು ಅಷ್ಟಿಷ್ಟಲ್ಲ. ತಕ್ಷಣಕ್ಕೆ ನಂಬಲು ಸಾಧ್ಯವಾಗದ ನಾನು 'ಈ ಪರಿ ವೆಚ್ಚವಾಗುತ್ತದೆ ಎಂದು ನಾನು ಊಹಿಸಿರಲೂ ಇಲ್ಲ. ನನಗೆ ನಂಬಲೂ ಸಾಧ್ಯವಾಗುತ್ತಿಲ್ಲ' ಎಂದು ಉತ್ತರಿಸಿ ಕಟ್ಟುವ ಹಣವನ್ನು ಎಟಿಎಂ ನಿಂದ ತಂದಿಟ್ಟುಕೊಂಡೆ. ಇನ್ನು ಒಂದು ಆಶ್ಚರ್ಯದ ಸಂಗತಿ ಎಂದರೆ ಒಟ್ಟಾರೆ ಹಣದ ಶೇ.40 ಭಾಗ ಮಾತ್ರ ಹೊಸ ಸಿಂಕ್ ಗೆ ತಗುಲುವ ವೆಚ್ಚವಾದರೆ ಅದಕ್ಕೆ ಕೆಲಸ ಮಾಡುವ ಕಾರ್ಮಿಕರ ಕೂಲಿ ಮಾತ್ರ ಬೆಚ್ಚಿ ಬೀಳಿಸುವಂಥದ್ದು!! 10 ರಿಂದ 15000 ಆಗಬಹುದು ಎಂದು ಕೊಂಡಿದ್ದ ನಾನು 50000 ಯೆನ್ ಅನ್ನು ಕೊಡಬೇಕು ಎಂದಾಗ ಹೇಗಾಗಿದ್ದಿರಬಹುದು..!!! ಉಳಿಸಬಹುದಾದ ಹಣದ ಬಹುಭಾಗ ಇಲ್ಲೇ 'ತೆತ್ತಬೇಕಾದ' ಸಂದರ್ಭ ಬಂದಿದ್ದು ನನ್ನ ದುರದೃಷ್ಟವೆ ಸರಿ.

ಜಪಾನಿನಲ್ಲೇ ಇದ್ದ ನಮ್ಮ ಒಬ್ಬ ಆತ್ಮೀಯರ ಹತ್ತಿರ ನನಗಾದ  ಸಂಕಟ ಗಳನ್ನೆಲ್ಲ ಹೇಳಿಕೊಂಡೆ. ಆಗ ಅವರೂ ತಮಗಾದ ಹಾಗು ತಮಗೆ ಗೊತ್ತಿದ್ದ ಇದೆ ತರಹದ ಘಟನೆಗಳನ್ನು ತಿಳಿಸಿದಾಗ,  ಬಹುಶಃ ನಾನು ಕಟ್ಟಬೇಕಾದ ಹಣವೇ ಕಡಿಮೆ ಎಂದೆನಿಸಿದ್ದು ಮಾತ್ರ ಸುಳ್ಳಲ್ಲ. ಈ ಘಟನೆಯಾದ ನಂತರ ಆದ್ಯಾವ ಪರಿ ಎಚ್ಚರ ವಹಿಸಿದ್ದೆ ಎಂದರೆ ಒಮ್ಮೊಮ್ಮೆ ನನಗೆ ನನ್ನನ್ನು ನೋಡಿಯೇ ನಗು ಬರುತ್ತಿತ್ತು. 

ಜಪಾನಿನಲ್ಲಿ ಹಳೆಯ ವಸ್ತುವನ್ನು ಎಸೆಯಲೂ ಕಷ್ಟ ಹಾಗು ಹೊಸದನ್ನು ಕೊಳ್ಳುವುದೂ ದುಬಾರಿ. ಸಣ್ಣ ಪುಟ್ಟ ವಸ್ತುಗಳಾದರೆ ಡಸ್ಟ್ ಬಿನ್ ಗೆ ಹಾಕಬಹುದು. ಆದರೆ ಕೆಟ್ಟುಹೋದ ಓವನ್, ಟಿವಿ ಮುಂತಾದ ವುಗಳನ್ನು...? ಮಾರಬೇಕಾದವರೇ ಹಣ ಕೊಟ್ಟು ಮರುಬಳಕೆ (ರಿಸೈಕಲ್) ಗೆ ನೀಡಬೇಕಾಗುತ್ತದೆ. ತಾತ್ಕಾಲಿಕವಾಗಿ ಜಪಾನಿನಲ್ಲಿ ಇರುವವರಿಗೆ, ವಾಪಾಸ್ ತಮ್ಮ ದೇಶಕ್ಕೆ ಹೋಗಬೇಕಾದ ಸಂದರ್ಭದಲ್ಲಿ ಈ ತರಹದ ಸಮಸ್ಯೆ ಬರುವುದು ನಿಶ್ಚಿತ.

ಈ ಎಲ್ಲ ಕಾರಣಕ್ಕೆ ಜಪಾನಿನಲ್ಲಿ ಹಳೆಯ ವಸ್ತುಗಳೂ ಬಹಳ ಚೆನ್ನಾಗಿರುತ್ತದೆ. ಹಾಗೆಯೇ ಎಲ್ಲ ರೀತಿಯ ಕೆಲಸ ಮಾಡುವವರೂ ಗೌರವದಿಂದ, ಯಾವುದೇ ಕೀಳರಿಮೆಯಿಲ್ಲದೆಯೇ ಬದುಕು ಸಾಗಿಸಲು ಸಾಧ್ಯವಾಗಿರಲೂಬಹುದು.