ಎರಡು ವರ್ಷದ ಹಿಂದೆ ನನ್ನ ಆತ್ಮೀಯರೊಬ್ಬರು ಅಮೆರಿಕದಲ್ಲಿದ್ದಾಗ
ಸ್ಕೈಡೈವ್ ಗೆ ಹೋದ ಫೋಟೋ ಹಾಗು ವೀಡಿಯೊ ಗಳನ್ನು ನೋಡಿ ಪುಳಕಿತನಾಗಿದ್ದೆ. ಆ ಕ್ಷಣದಲ್ಲೇ ಅಂದುಕೊಂಡಿದ್ದೆ
ನಾನೂ ಸಹ ನನ್ನ ಜೀವನದಲ್ಲಿ ಒಮ್ಮೆಯಾದರೂ ಸ್ಕೈಡೈವ್ ನ ಅನುಭವವನ್ನು ಪಡೆಯಬೇಕು ಅಂತ. ಅದಾದ ಕೆಲವೇ
ದಿನಗಳಲ್ಲಿ ಹಿಂದಿ ಭಾಷೆಯ 'ಜಿಂದಗೀ ನಮಿಲೇಗಿ ದೋ ಬಾರಾ' ಎಂಬ ಚಲನಚಿತ್ರವನ್ನು ನೋಡಿ ಅದರಲ್ಲಿ ನೋಡಿದ
ಸ್ಕೈಡೈವ್ ನನ್ನನ್ನು ಇನ್ನು ಹೆಚ್ಚಿನ ಆಕರ್ಷಣೆ ಮಾಡಿತ್ತು. ಕನಸಾಗಿದ್ದಂತಹ ಆಸೆ, ಗುರಿಯಾಗಿಬಿಟ್ಟಿತು. ಸ್ಕೈಡೈವ್ ಗೋಸ್ಕರವಾಗಿಯಾದರೂ ನಾನೂ ಬೇರೆ ದೇಶದ ಪ್ರಯಾಣ ಮಾಡಬೇಕು ಎಂಬ
ಮಟ್ಟಕ್ಕೆ ಇಳಿದಿದ್ದೆ.
ಆ ನಂತರ ನಾನೂ ಅದರ ಬಗ್ಗೆ ಯೋಚನೆ ಮಾಡಿದ್ದೆ ಇಲ್ಲ.
ನಾನು ಮೊದಲ
ಬಾರಿಗೆ ಜಪಾನ್ಗೆ ಬಂದಾಗಲೂ ನನ್ನ ಮನಸ್ಸಿನಲ್ಲಿ ಸ್ಕೈಡೈವ್ ಸುಪ್ತವಾಗಿತ್ತು, ಅದರ ಪಾಡಿಗೆ. ಅದಾಗ
ತಾನೇ ನಡೆದಂತಹ ಸುನಾಮಿಯ ಕಾರಣಕ್ಕೆ ಸಾಕಷ್ಟು ಮನರಂಜನಾ ವೈವಿಧ್ಯತೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಅದಕ್ಕೆ ನನಗೆ ಆ ಬಗ್ಗೆ ಸುಳಿಯೂ
ಸಿಗಲಿಲ್ಲ. ಬಂದಿದ್ದು ಗೊತ್ತಾಗದ ರೀತಿಯಲ್ಲಿ ವಾಪಾಸಾಗಿದ್ದೆ.
ಆದರೆ ಈ ಸಲ ಬಂದಾಗ ನನ್ನ ಸಹೋದ್ಯೋಗಿಯೊಬ್ಬರು ನೀಡಿದ ಸ್ಕೈ ಡೈವ್ ನ ಸಲಹೆ ನನ್ನ ಮನಸ್ಸಿನಲ್ಲಿ ಆಸೆ ಹುಟ್ಟಿಸಿತು. ತಕ್ಷಣವೇ ಮಾಹಿತಿ ಸಂಗ್ರಹಿಸಿ ನೋಡಿದರೆ ಅತ್ಯಂತ ದುಬಾರಿಯಾಗಿತ್ತು. ಬೇರೆಡೆಗಳಿಗಿಂತ ಸಾಕಷ್ಟು ದುಬಾರಿಯಾಗಿತ್ತು. ಅಮೆರಿಕದಲ್ಲೇ ಅಗ್ಗವಾಗಿತ್ತು. ಸ್ಕೈಡೈವ್ ಆಸೆಯನ್ನು ಈಡೇರಿಸಿಕೊಳ್ಳಲು ಅಮೆರಿಕಕ್ಕೆ ಹೋಗುವ ಅವಕಾಶಕ್ಕಾಗಿ ಕಾಯಬೇಕೋ ಅಥವಾ ಜಪಾನ್ ನಲ್ಲೆ ಮುಗಿಸಿಕೊಳ್ಳಬೇಕೋ ಎಂಬ ದ್ವಂದ್ವದಲ್ಲಿ ನಾ ಬಂದು ಬಿದ್ದೆ. 2-3 ದಿನಗಳ ನಿರಂತರ ಆಲೋಚನೆಯ ನಂತರ ನಿರ್ಧರಿಸಿದ್ದೆ, ಸ್ಕೈ ಡೈವ್ ಮುಗಿಸಿಕೊಂಡು ಹೋಗಲು.
ಭಾಷೆಯ ಸಮಸ್ಯೆಯಿಂದ ನನ್ನ ಸಹೋದ್ಯೋಗಿ ಯ ಸಹಾಯ ಪಡೆದು ಏನೇನು ಮಾಡಬೇಕೆಂದು ತಿಳಿದು ೧೫ ದಿನ ಬಿಟ್ಟು ಕಾಯ್ದಿರಿಸಿದೆ. ಪ್ರತಿ ದಿನ ಯುಟ್ಯೂಬ್ ನಲ್ಲಿ ಬೇರೆಯವರ ಸ್ಕೈ ಡೈವ್ ನ ವೀಡಿಯೊಗಳನ್ನ ನೋಡಲು ಶುರುಮಾಡಿದೆ. ಅವರ ಸ್ಥಳದಲ್ಲಿ ನನ್ನನ್ನೇ ಕೂರಿಸಿ ಕನಸು ಕಾಣಲು ಶುರುವಿಟ್ಟುಕೊಂಡೆ. ಆ ಸಮಯದಲ್ಲಿ ನನ್ನ ಸಹೋದ್ಯೋಗಿಯೊಬ್ಬರ ಪತಿಯೊಬ್ಬರು ನ್ಯೂಜಿಲ್ಯಾಂಡ್ ನಲ್ಲಿ ಸ್ಕೈ ಡೈವ್ ಗೆ ಹೋದ ಸುದ್ದಿ ತಿಳಿದು ಅವರ ವೀಡಿಯೊವನ್ನೂ ಪಡೆದು ನೋಡಿದೆ. ೧೫ ದಿನವೂ ಇದೇ ಕಾಯಕವಾಯಿತು.
ಇನ್ನೇನು ವಾರವಿದೆ ಎಂದಾಗ ಅವತ್ತಿನ ಹವಾಮಾನ ಮುನ್ಸೂಚನೆಯನ್ನು ನೋಡಿದರೆ ಮಳೆ ಬರುವ ಲಕ್ಷಣವಿತ್ತು. ಆದರೆ ಒಂದು ವಾರ ಮುಂಚಿನ ಮುನ್ಸೂಚನೆಯ ಕಾರಣಕ್ಕೆ ನಿರ್ಧಾರ ಮಾಡಲು ಆಗುವುದಿಲ್ಲ ಎಂದು ತಿಳಿದು, ಹವಾಮಾನ ಬದಲಾಗಬಹುದು ಎಂದು ಆಸೆಯಿಟ್ಟು ಕಾದೆ. ನನ್ನ ಸರತಿ ನಾಳೆ ಎಂದಾಗ ನೋಡಿದರೆ, ಮಳೆ ಬರುವುದು ಖಚಿತ ಎಂದು ತಿಳಿದು ಸಕ್ಕತ್ ಬೇಜಾರಾಯ್ತು. ಇಲ್ಲಿ ಜಪಾನ್ ನಲ್ಲಿ ಹವಾಮಾನ ಮುನ್ಸೂಚನೆ ಯಾವಾಗಲೂ ಶೇಕಡಾ ೧೦೦. ಯಾರಿಗೂ ಸಂದೇಹವಿರುವುದಿಲ್ಲ. ವರದಿಯನ್ನು ನೋಡಿಯೇ ಛತ್ರಿ ತೆಗೆದುಕೊಂಡು ಹೋಗಬೇಕೆ-ಬೇಡವೇ ಎಂದು ನಿರ್ಧರಿಸಿ ಮನೆಯಿಂದ ಹೊರಡುತ್ತಾರೆ. ಇನ್ನೇನು ಮಾಡುವುದು, ಇ-ಮೇಲ್ ಕಳಿಸಿ ಮುಂದಿನ ವಾರಕ್ಕೆ ಬದಲಾಯಿಸಿದೆ.
ಮತ್ತದೇ ಕಾಯಕ, ವೀಡಿಯೊಗಳನ್ನು ನೋಡುವುದು. ವಾರ ಕಳೆದು ಹವಾಮಾನ ಮುನ್ಸೂಚನೆ ನೋಡಿದರೆ ಈ ಸಲವೂ ವರುಣದೇವನ ಕೃಪೆ ನನ್ನ ಮೇಲಿರಲಿಲ್ಲ. ಮತ್ತೊಮ್ಮೆ ಮುಂದಿನ ವಾರಕ್ಕೆ ಮುಂದೂಡಿದೆ.
ಅದರ ಮುಂದಿನ ವಾರ ಮಳೆಯಿರಲಿಲ್ಲ ಎಂದು ಖುಷಿಯಾಗಿತ್ತು. ಆದರೆ ಮೋಡದ ವಾತಾವರಣ ಜಾಸ್ತಿಯಾಗಿತ್ತು ಹಾಗು ಚಳಿ ಕೂಡ ಅಧಿಕವಾಗಿತ್ತು. ಏನು ಮಾಡುವುದು ಎಂದು ಯೋಚಿಸಿದಾಗ, ಇಷ್ಟೊಂದು ಖರ್ಚು ಮಾಡಿ ಹೋಗುತ್ತಿರುವಾಗ ಒಳ್ಳೆಯ ವಾತಾವರಣವಿದ್ದಾಗಲೇ ಹೋದರಾಯಿತು ಎಂದು ನಿರ್ಧರಿಸಿ ಮತ್ತೊಂದು ವಾರ ಮುಂದೂಡಲು ಹೊರಟರೆ ನನ್ನ ದುರಾದೃಷ್ಟಕ್ಕೆ ಆಂಗ್ಲ ಭಾಷೆ ಬರುವ ತರಬೇತುದಾರ ರಜೆಯಲ್ಲಿದ್ದ. ಆ ಕಾರಣಕ್ಕಾಗಿ ನನಗೆ ಕಷ್ಟವಾಗಬಹುದು ಎಂದು ಸಲಹೆ ಬಂದ ಕಾರಣಕ್ಕೆ ಅದರ ಮುಂದಿನ ವಾರಕ್ಕೆ ಮುಂದೂಡಿದೆ, ಅಂದರೆ ಇನ್ನು ೧೫ ದಿನ ಕಾಯಬೇಕಾಯಿತು.
ಅಷ್ಟೊತ್ತಿಗೆ ನನಗೂ ಸಾಕಾಗಿ ಹೋಗಿತ್ತು ವೀಡಿಯೊ ಗಳನ್ನು ನೋಡಿ ನೋಡಿ. ಯಾಕೋ ನನಗೆ ಅವಕಾಶವಿಲ್ಲ ಅನ್ಸುತ್ತೆ ಎಂದುಕೊಂಡು ವೃಥಾ ಕುತೂಹಲ ಬೇಡ ಎಂದುಕೊಂಡು ಹಾಗೆ ಸುಮ್ಮನೆ ದಿನ ಕಳೆದು ನೋಡಿದರೆ ವಾತಾವರಣ ಅನುಕೂಲಕರ ವಾಗಿತ್ತು. ಬೇರೆ ಏನು ಯೋಚನೆ ಮಾಡದೆ ನಿರ್ಧಾರ ಮಾಡಿದೆ, ಏನಾದರೂ ಮಾಡಿ ಇವತ್ತು ಮುಗಿಸಿಕೊಳ್ಳಬೇಕು ಎಂದು ನಿರ್ಧರಿಸಿದವನೇ ಎಲ್ಲ ವಿಳಾಸಗಳನ್ನು, ಜಾಗ ತಲಪುವ ವಿಧಾನಗಳು, ಬಸ್ ನ ಮಾಹಿತಿಗಳು, ರೈಲಿನ ಮಾಹಿತಿಗಳನ್ನು ಕಲೆ ಹಾಕಿ ಪ್ರಿಂಟ್ ತೆಗೆದಿಟ್ಟುಕೊಂಡೆ. ಮಾರನೆ ದಿನ ಬೆಳಗ್ಗೆ 7.30ಕ್ಕೆ ಮನೆ ಬಿಟ್ಟೆ.
ಸುಮಾರು 2.30 ಗಂಟೆ ಕಾಲದ ಸಮಯ ಬೇಕಾಗಿತ್ತು ಜಾಗ ತಲುಪಲು. ಮಧ್ಯಾಹ್ನ 12ಕ್ಕೆ ನನ್ನ ಸರದಿಯಿತ್ತು. ಸುಮಾರು 10.30 ಕ್ಕೆ ನಾನು ಜಾಗ ತಲುಪಿದೆ. ಅಲ್ಲಿದ್ದ ಜನರನ್ನು, ಪುಟ್ಟ ಪುಟ್ಟ ವಿಮಾನಗಳನ್ನು, ಹಾರುತ್ತಿದ್ದ ವ್ಯಕ್ತಿಗಳನ್ನು, ತಮ್ಮ ಸರದಿಗಾಗಿ ಕಾಯುತ್ತಿದ್ದ ವರನ್ನು ನೋಡಿ, ನನ್ನ ಸರದಿಯೂ ಇನ್ನು ಕೆಲವೇ ಗಂಟೆಗಳಲ್ಲಿ ಬರುತ್ತದೆ ಎಂಬುದನ್ನು ನೆನೆಸಿಕೊಂಡಾಗ ಎಲ್ಲ ಕನಸಿನತೆಯೇ ಭಾಸವಾಗಿತ್ತು. ಮಾಹಿತಿಗಳ ಪತ್ರಕ ಪೂರ್ತಿ ಮಾಡಿ, ವಿಳಾಸ ಕೊಟ್ಟು, ನನ್ನ ಸರದಿಗಾಗಿ ಕಾಯಲು ಅಣಿಯಾದೆ. ಸ್ಕೈಡೈವ್ ನ ಸಹಾಯಕರು ತಮ್ಮ ತಮ್ಮ ಪ್ಯಾರಾಚೂಟ್ ಗಳನ್ನು ಬ್ಯಾಗ್ ಗಳಿಗೆ ನಾಜೂಕಿನಿಂದ ತುಂಬುತ್ತಿದ್ದ ರೀತಿ, ವೇಷಗಳನ್ನು ತೊಡುವ ರೀತಿ ನೋಡುತ್ತಾ ನನ್ನ ಸರತಿಯೂ ಬಂದೇ ಬಿಟ್ಟಿತು.
ನನ್ನ ಸಹಾಯಕ ಹಾಗು ವೀಡಿಯೊ ತೆಗೆಯುವವರನ್ನು ಪರಿಚಯಿಸಿಕೊಂಡು ನನ್ನ ವೇಷವನ್ನು ತೊಡಲು ಹೊರಟೆ. ನನ್ನ ಸಹಾಯಕ ಬಂದು ಸಹಾಯ ಮಾಡಿದ. ವೀಡಿಯೊಗ್ರಾಫೆರ್ ತನ್ನ ಕೆಲಸವನ್ನು ಶುರುಮಾಡಿದ. ವ್ಯಾನ್ ಗೆ ಕೂತೆ. ನಾವು 14 ಜನ ಇದ್ದೆವು. ಅದರಲ್ಲಿ 9 ಜನ ಹಾರುವವರು, ಉಳಿದವರು ಸಹಾಯಕರಿದ್ದರು. ನಮ್ಮನ್ನು ಹೊತ್ತೊಯ್ಯುವ ಪುಟ್ಟ ವಿಮಾನದತ್ತ ಹೋಗಿ ಎಲ್ಲರು ಒಬ್ಬೊಬ್ಬರಾಗಿ ಏರಿ ಕೂತೆವು. ವಿಮಾನ ಹೊರಟಿತ್ತು. ಎಲ್ಲವೂ ಕನಸಿನಂತೆಯೇ ಭಾಸವಾಗುತ್ತಿತ್ತು.
ಸುಮಾರು 23 ನಿಮಷಗಳ ನಂತರ 13000 ಅಡಿಗಳ ಎತ್ತರವನ್ನು ತಲುಪಿದ ನಂತರ ಬಾಗಿಲು ತೆರೆದರು. ಒಬ್ಬೊಬ್ಬರೇ ಹಾರುವವರು (ಸೋಲೋ) ತುಪು ತುಪು ಎಂದು ಹಾರಿದರು. ನನಗೆ ಕಾರ್ಟೂನ್ ನೋಡಿದ ಹಾಗಿತ್ತು. ನನ್ನ ಸರತಿಯೂ ಬಂದಿತು. ನನ್ನ ಸಹಾಯಕ ನನ್ನನ್ನು ಮುಂದೆ ಬಿಟ್ಟು, 3 ಎಣಿಸಿದ ನಂತರ ಹಾರುವುದು ಎಂದು ಹೇಳಿದ. ಮೊದಲು ನನ್ನ ವೀಡಿಯೊಗ್ರಾಫೆರ್ ಹೊರಗೆ ಹಾರಿದ. ನಂತರ ನಾವು ಹಾರಿಯೇ ಬಿಟ್ಟೆವು. ಆ ಚಳಿ ಗಾಳಿಯ ನಡುವೆ ಕ್ಯಾಮೆರಾ ವ್ಯಕ್ತಿ ಯನ್ನು ನೋಡುತ್ತಾ ಸುಮಾರು ೫೦ ಸೆಕೆಂಡುಗಳ ಕಾಲ ಕೆಳಗೆ ಬೀಳುತ್ತಿದ್ದೆವು. ನಾನು ಕ್ಯಾಮೆರಾ ವ್ಯಕ್ತಿಯನ್ನು ನೋಡುತ್ತಿದ್ದ ಕಾರಣಕ್ಕೆ ನಾನು ಕೆಳಗೆ ನೋಡಲೇ ಇಲ್ಲ. ಅದಕ್ಕೆ ನಾನು ಕೆಳಗೆ ಬೀಳುತ್ತಿದ್ದೇನೆ ಎಂದೆನಿಸಲೇ ಇಲ್ಲ. ಆದರೆ ಗಾಳಿಯ ವೇಗ ಮಾತ್ರ ಸಾಕಷ್ಟಿತ್ತು..!
ಆ ನಂತರ ನನ್ನ ಸಹಾಯಕ ಪ್ಯಾರಚೂಟನ್ನು ತೆರೆದ, ಕ್ಯಾಮೆರಾ ವ್ಯಕ್ತಿ ತನ್ನ ಹಾದಿಯನ್ನು ಹಿಡಿದು ದೂರವಾದ. ಎಲ್ಲರು ನಿರ್ಧಿಷ್ಟ ದೂರವನ್ನು ಕಾಪಾಡಿಕೊಂಡು ಭೂಮಿಗೆ ಇಳಿಯಬೇಕಿತ್ತು. ಪ್ಯಾರಚೂಟನ್ನು ತೆರೆದ ನಂತರ ಎಂತಹ ಅದ್ಭುತ ಅನುಭವವೆಂದರೆ ಅನುಭವಿಸಿಯೇ ಗೊತ್ತಾಗಬೇಕು. ಹಕ್ಕಿಯಂತೆ ಹಾರುತ್ತಿದ್ದೇವೆ ಎಂದೆನಿಸುತ್ತಿತ್ತು. ಆರೇಳು ನಿಮಿಷಗಳ ನಂತರ ಇನ್ನೇನು ಭೂಮಿಯನ್ನು ಮುಟ್ಟುತ್ತೇವೆ ಎಂದಾಗ ಕ್ಯಾಮೆರಾ ವ್ಯಕ್ತಿ ಎದುರಾಗಿ ಆಗಿನ ಕ್ಷಣವನ್ನೂ ಸೆರೆಹಿಡಿದ. 2 ವರ್ಷಗಳ ಹಿಂದೆ ನಾನು ಒಮ್ಮೆ ಹೋಗಬೇಕು ಎಂದುಕೊಂಡಿದ್ದ ಸ್ಕೈಡೈವ್ ಮುಗಿದಿತ್ತು. ಎಲ್ಲ ಕನಸಿನಂತೆಯೇ.
ಫೋಟೋಗಳು ಹಾಗಿ ವೀಡಿಯೊ ಡಿವಿಡಿಯನ್ನು ಕಳಿಸಲು ನನ್ನ ಆತ್ಮೀಯರೊಬ್ಬರ ವಿಳಾಸವನ್ನು ಕೊಟ್ಟು ನಾನು ಹೊರಟು ಬಂದೆ.
ನನಗೆ ಬೇಸರದ ಒಂದೇ ವಿಷಯವೆಂದರೆ ಯಾವುದೇ ಕ್ಷಣದಲ್ಲೂ ನನಗೆ ಭಯವಾಗದ್ದು. ಯಾಕೆಂದರೆ ಭಯವಿದ್ದರೆ ಮಾತ್ರ ಆ ಕ್ಷಣದ ಅನುಭವ ತುಂಬಾ ದಿನಗಳವರೆಗೆ ನಮ್ಮಲ್ಲಿರುತ್ತದೆ. ಆದರೆ ನನಗೆ ಪ್ರತಿಯೊಂದು ಕ್ಷಣವನ್ನು ಸರಿಯಾಗಿ ಅನುಭವಿಸಲೇ ಆಗದ ರೀತಿಯಲ್ಲಿ, ಸಲೀಸಾಗಿ ಮುಗಿದುಹೋಗಿತ್ತು.