Jun 23, 2011

'ಸಂಸ್ಕೃತ ಗ್ರಾಮ' ಮತ್ತೂರಿನ ಹಿರಿಮೆಗೆ ಮತ್ತೊಂದು ಗರಿ - ಪುರಾತನ ದೇವಸ್ಥಾನದ ಲೋಕಾರ್ಪಣೆ




ಸಂಸ್ಕೃತ ಭಾಷೆಯ ಬಗ್ಗೆ ಕೇಳಿದವರಿಗೆ ಮತ್ತೂರಿನ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಸಂಸ್ಕೃತ ಭಾಷೆಯ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ಹಾಗು ಆ ಕಾಳಜಿಯನ್ನು ತನ್ನದೇ ಆದ ರೀತಿಯಲ್ಲಿ ಅಭಿವ್ಯಕ್ತಗೊಳಿಸುತ್ತಿರುವ ಗ್ರಾಮ ಮತ್ತೂರು. ಸಂಸ್ಕೃತ ಭಾಷೆಯನ್ನು ಕಲಿಯಲು ಹಾಗೂ ಗ್ರಾಮವನ್ನು ನೋಡಲು ವಿದೇಶೀಯರಾದಿಯಾಗಿ ಬಂದವರು ಸಾಕಷ್ಟು ಮಂದಿ. ನಮ್ಮ ಮನೆಯಲ್ಲೂ ಉಳಿದವರು ಅವಿರಾಚನ್ ಎಂಬ ಜರ್ಮನ್ ಕಂ ಕೇರಳದವರು.



ಈಗ ಮತ್ತೂ ರಿನ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಸುಮಾರು ೧೪೦೦ ವರ್ಷದ ಇತಿಹಾಸವಿರುವ ಶ್ರೀ ಭೀಮೇಶ್ವರ ದೇವಸ್ಥಾನ ಸದ್ದುಗದ್ದಲವಿಲ್ಲದೆ, ಯಾವುದೇ ಆಡಂಬರವಿಲ್ಲದೆ, ರಾಜಕೀಯದ ಲೇಪನವಿಲ್ಲದೆ ಎದ್ದು ನಿಂತಿದೆ. ಮತ್ತೂರಿನಿಂದ ಸುಮಾರು ೧ ಕಿಲೋಮೀಟರ್ ನ ದೂರದಲ್ಲಿ ಈ ದೇವಸ್ಥಾನ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿದೆ. ಸಮೃದ್ಧ ತುಂಗಾ ನದಿಯ ದಡದಲ್ಲಿ ಶುದ್ಧ ಹಸಿರಿನ ರಮಣೀಯ ವಾತಾವರಣದ ಮಡುವಿನಲ್ಲಿ ಅತ್ಯಂತ ಪುರಾತನವಾದ ಆದರೆ ಅವಸಾನದ ಅಂಚಿನಲ್ಲಿದ್ದ ಈ ದೇವಸ್ಥಾನವನ್ನು ಮರು ಜೋಡಿಸಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಸಾರ್ವಜನಿಕರ ದರ್ಶನಕ್ಕೆ ಅನುವುಮಾಡಿಕೊಡಲಾಗಿದೆ.

ಸೂರ್ಯೋದಯವಾದ ಮರುಕ್ಷಣದಲ್ಲೇ ಸೂರ್ಯನ ಪ್ರಥಮ ಕಿರಣ ದೇವಾಲಯದ ಒಳಗಿರುವ ಈಶ್ವರ ಲಿಂಗದ ಮೇಲೆ ಬೀಳುವ ದೃಶ್ಯ ಕ್ಕೆ ಇತಿಹಾಸವಿರುವ ಬಗ್ಗೆ ನಂಬಿಕೆಯಿದೆ. ಅತ್ಯಂತ ಪುರಾತನವಾದ ಈ ದೇವಸ್ಥಾನ ಹಲವು ಇತಿಹಾಸ ಹಾಗೂ ವಿಶೇಷ ನಂಬಿಕೆಗಳಿಂದ ಕೂಡಿದ್ದು ಕೇವಲ ದೈವಭಕ್ತರಿಗಷ್ಟೇ ಅಲ್ಲದೆ ಇತಿಹಾಸದ ಅಧ್ಯಯನಕಾರರಿಗೂ ಇದು ಹಲವು ವಿಶೇಷ ಮಾಹಿತಿಗಳನ್ನೂ ಒದಗಿಸಬಲ್ಲುದಾಗಿದೆ. ಕಾರಣ, ತುಂಗಾ ನದಿಯ ದಡದಲ್ಲಿ ಇದೆ ರೀತಿಯ ಪುರಾತನವಾದ ದೇವಸ್ಥಾನಗಳು ಇರುವಿಕೆಯ ಬಗ್ಗೆ ಹಲವಾರು ಮಾಹಿತಿಗಳು ಕಾಣಸಿಗುತ್ತವೆಯಂತೆ.

ಒಂದು ಒಳ್ಳೆಯ ದೈವಿಕ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಹಾಗೂ ಪ್ರಾಚೀನ ದೇವಾಲಯದ ರಕ್ಷಣೆಯ ಕಾರಣಕ್ಕಾಗಿ ಸಾಕಷ್ಟು ಶ್ರಮ ವಹಿಸಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸವನ್ನು ಬಹುತೇಕ ಪೂರ್ಣಗೊಳಿಸಿಯಾಗಿದೆ. ಇನ್ನು ಹಲವಾರು ಜನರ ಸಹಾಯ ಹಾಗೂ ಶ್ರದ್ಧೆಯ ಅವಶ್ಯಕತೆಯಿದೆ. ಎಲ್ಲ ಸಹೃದಯ ಆಸ್ತಿಕರಿಗೂ ಹಾಗೂ ಇತಿಹಾಸದ ಆಸಕ್ತರಿಗೂ ಆತ್ಮೀಯ ಸ್ವಾಗತ.