ಇದೇ ವಿಷಯಕ್ಕೆ ಸಂಬಂಧಿಸಿದ್ದು 'ದೇವರು' ಎಂಬ 'ಅನುಭವ'.
ನಾನು ಉದ್ದೇಶಪೂರ್ವಕವಾಗಿಯೇ 'ದೇವರು' ಎನ್ನುವುದನ್ನು 'ಅನುಭವ' ಎಂದು ಕರೆದಿದ್ದೇನೆ. ಆದರೆ ಇದು 'ಪ್ರತ್ಯಕ್ಷ'ವಾಗುವ ಅನುಭವವಲ್ಲ. ನಂಬಿಕೆಯ ಕಾರಣದಿಂದ ಉಂಟಾಗುವ ಅನುಭವ. ನಂಬಿಕೆಯ ನಂತರವಷ್ಟೇ ಅನುಭವದ ಅನುಭವ ಸಾಧ್ಯ ಎನ್ನುವುದು ಮತ್ತೇನೂ ಹೇಳಬೇಕಾಗಿಲ್ಲ.
ಡಿಸೆಂಬರ್ 15 ಮತ್ತು 16 ಹೊಸಹಳ್ಳಿಯಲ್ಲೂ ಹಾಗು 17 ರಿಂದ 19 ರ ವರೆಗೆ ಮತ್ತೂರಿನಲ್ಲೂ ನಡೆದ 'ತೇರಾಕೋಟಿ ರಾಮನಾಮತಾರಕದ ಸಾಂಗತಾಯಜ್ಞ' ಹತ್ತು ಹಲವು ವಿಶೇಷ, ಪರಿಣಾಮ, ಪ್ರೇರಣೆಗಳೊಂದಿಗೆ ಮುಕ್ತಾಯಗೊಂಡದ್ದು ಈಗ ಇತಿಹಾಸ. ಯಜ್ಞದಲ್ಲಿ ಭಾಗವಹಿಸಿದವರು, ಆ ನಂತರದ ಹಾಗು ಆ ಮೊದಲ ಕೆಲವು ಸನ್ನಿವೇಶಗಳನ್ನು ನೋಡಿದಾಗ ನನಗನ್ನಿಸಿದ್ದು ಮೇಲಿನದು.
ಹೆಬ್ಬಳ್ಳಿಯ ಶ್ರೀ ದತ್ತಾವಧೂತ ಮಹಾರಾಜರ ಉಪಸ್ಥಿತಿಯಲ್ಲಿ ನಡೆದ ೫ ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ೨ ಸಾವಿರಕ್ಕೂ ಹೆಚ್ಚು ಮಂದಿ. ಮೊದಲೆರಡು ದಿನ ಹೊಸಹಳ್ಳಿಯಲ್ಲಿಯೂ ಹಾಗು ನಂತರದ ೩ ದಿನ ಮತ್ತೂರಿನಲ್ಲಿಯೂ ನಡೆದ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಹುತೇಕ ಬಂದವರೆಲ್ಲರೂ ಭಾಗವಹಿಸಿದುದು ಕಂಡುಬಂತು. ದತ್ತಾವಧೂತರ ಪ್ರವಚನಗಳಿಗೆ ಹದಿಹರೆಯದವರೆನ್ನದೆ ಎಲ್ಲರೂ ದೌಡಾಯಿಸುತ್ತಿದ್ದುದು ಕೆಲವರಿಗೆ ಆಶ್ಚರ್ಯ ಹಾಗು ಮತ್ತೆ ಕೆಲವರಿಗೆ 'ದಾರಿ ತಪ್ಪುತ್ತಿರುವ ಯುವಕರು' ಎಂದೆನಿಸಿದುದೂ ಉಂಟು.
ಪ್ರತಿದಿನದ ಮುಖ್ಯ ಕಾರ್ಯಕ್ರಮಗಳಾದ ರಾಮತಾರಕ ಹೋಮ ಹಾಗು ದತ್ತಾವಧೂತರ ಪ್ರವಚನಗಳಿಗೆ ಜನರು ಕಾದು ಕುಳಿತ್ತಿದ್ದ ಹಾಗೆ ಅನ್ನಿಸುತ್ತಿತ್ತು. ಹೋಮದ ಪೂರ್ಣಾಹುತಿಯವರೆಗೂ ಜನರು ಮಂತ್ರಗಳನ್ನು ಕೇಳುತ್ತಾ ಅಲುಗಾಡದೆ ಕುಳಿತು ಭಾಗವಹಿಸುತ್ತಿದ್ದುದು ಸಾಮಾನ್ಯವಾಗಿತ್ತು. ಹಿಂದೆ ಕಲಿತು ಈಗ ಮರೆತು 'ದಾರಿ ಬಿಟ್ಟಿದ್ದ'ವರಲ್ಲಿ ಕೆಲವರು, ಸಂಪಾದನೆಗೋಸ್ಕರವಲ್ಲದಿದ್ದರೂ ಜತೆಗೆ ಜತೆಯಾಗುವುದಕ್ಕೆ ಕಲಿತ ಮಂತ್ರಗಳನ್ನು ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.
ಧಾರ್ಮಿಕ ಕಾರ್ಯಕ್ರಮದ ವಿಶೇಷ ವಾತಾವರಣದಲ್ಲಿ ಶಾಲೆಗೇ ಇನ್ನೂ ಸೇರದ ಮಕ್ಕಳಾದಿಯಾಗಿ ಎಲ್ಲರ ಕೈಯಲ್ಲಿ ಜಪಮಾಲೆ, ಬಾಯಲ್ಲಿ ರಾಮಜಪ ವನ್ನು ನೋಡುತ್ತಿದ್ದ ಪೋಷಕರಲ್ಲಿ ಸಂತೋಷಪಟ್ಟವರು ಹಾಗು ಭಯಪಟ್ಟವರೂ ಸೇರಿದ್ದಾರೆ. ಆದರೆ ಆ ಸಮಯದಲ್ಲಿ ಇಡೀ ಊರು ರಾಮನಾಮದಲೆಯಲ್ಲಿ ಮುಳುಗಿದ್ದುದು ಮಾತ್ರ ಸತ್ಯ.
ಪ್ರಸ್ತುತ ಈ ಮಟ್ಟದ ಆಧುನಿಕತೆಯ ಅಬ್ಬರದಲ್ಲಿ, 'ಕಾಂಕ್ರೀಟ್ ರಸ್ತೆಗಳ' ಮೇಲೆ ಹಳ್ಳಿಗಳನ್ನು 'ಕಟ್ಟುತ್ತಿರುವಾಗ' ಒಂದು ಸಂಪೂರ್ಣ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿ ಜನರನ್ನು ಅದರಲ್ಲಿ ತಲ್ಲೀನರನ್ನಾಗಿಸಿದುದು ವಿಶೇಷವೇ.