Dec 27, 2010

ರಾಜೀವರ ಪ್ರವಾಸಗಳು ಯಾವ ರಾಷ್ಟ್ರಕೆಲಸಕ್ಕೆ ಕಡಿಮೆ?


ಯಾವುದೇ ಒಂದು ಶ್ರೇಷ್ಠ ಸಿದ್ದಾಂತ ಅಥವಾ ಜೀವನಪದ್ದತಿಯ ಬಗ್ಗೆ ಮಾತಾಡುವುದು ಬಹಳ ಸುಲಭ. ಆದರೆ ಪ್ರಸ್ತುತ ಆಚರಣೆಯಲ್ಲಿ ತರುವುದು ಸಾಮಾನ್ಯರಿಗೆ ತುಸು ಕಷ್ಟ. ಆದರೆ ನುಡಿ ಮತ್ತು ನಡೆ ಎರಡರಲ್ಲೂ ಒಂದೇ ಸಮನಾಗಿ ಇರುವುದು ಧ್ಯೇಯ ನಿಮಿತ್ತರಿಗೆ ಮಾತ್ರ ಸಾಧ್ಯ ಎಂದು ಹಿರಿಯರೊಬ್ಬರು ಹೇಳಿದ ನೆನಪು.


ಬಹುಶಃ 10 ವರ್ಷಗಳ ಹಿಂದೆ, ನಮ್ಮ ಊರಿಗೂ ಬಂದಿದ್ದರು. ಬರುವ ಸ್ವಲ್ಪ ಸಮಯಕ್ಕೆ ಮುಂಚೆಯೇ ತಿಳಿದದ್ದು ಅವರು ಬರುತ್ತಾರೆಂದು. ಅದುವರೆಗೆ ಬರೇ ಕ್ಯಾಸೆಟ್ ಗಳಲ್ಲಿ, ಸಿಡಿಗಳಲ್ಲಿ ಕೇಳಿದ್ದೆವು ಅವರ ಮಾತುಗಳನ್ನು. ಹಿಂದಿ ಅರ್ಥವಾಗದಿದ್ದರೂ ಅವರ ಮಾತುಗಳ ಹಿಂದಿದ್ದ ಭಾವನೆಗಳು, ಉದ್ದೇಶಗಳಿಂದಲೇ ಸಾಕಷ್ಟು ಅರ್ಥವಾಗುತ್ತಿತ್ತು. ಅದುವರೆಗೆ ನೇರವಾಗಿ ಯಾರ ಹಿಂದಿ ಭಾಷಣವನ್ನು ಕೇಳಿದ್ದಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ 'ಸಂಸ್ಕಾರ'ದ ಕಾರಣದಿಂದ ಮೊದಲೇ ಇದ್ದ 'ಸ್ವದೇಶೀ' ಎಂಬ ಕಲ್ಪನೆಗೆ ಆಚರಣೆಯ ಆಯಾಮವನ್ನು ಕೊಟ್ಟದ್ದು 'ರಾಷ್ಟ್ರಬಂಧು ರಾಜೀವ್ ದೀಕ್ಷಿತ'ರ ನಡವಳಿಕೆ ಹಾಗು ಭಾಷಣಗಳು. ಹೌದು ನಮ್ಮೆಲ್ಲರಿಗೂ ಅವರು ಪರಿಚಯವಿದ್ದದ್ದು 'ರಾಷ್ಟ್ರಬಂಧು' ಎಂತಲೇ. ಅವರ ಭಾಷಣಗಳಿಗಿಂತ ಹೆಚ್ಚಾಗಿ ಅವರ ಜೀವನ ಪದ್ದತಿಯಿಂದಲೇ ಅವರನ್ನು 'ರಾಷ್ಟ್ರಬಂಧು' ಎಂದು ಗುರುತಿಸುತ್ತಿದ್ದೆವು.


ಮೊದಲೇ ಇದ್ದ 'ಸ್ವದೇಶೀ' ನಡವಳಿಕೆಗೆ ಮತ್ತಷ್ಟು ಶ್ರದ್ಧೆ ಹಾಗು ರಾಷ್ಟ್ರಭಕ್ತಿಯನ್ನು ಪೂರೈಕೆ ಮಾಡಿದ ಕೀರ್ತಿ ರಾಜೀವ್ ದೀಕ್ಷಿತರಿಗೆ ಸಲ್ಲಬೇಕು. ಮೊನ್ನೆ ನವಂಬರ್ ೩೦ ರಂದು, ಹುಟ್ಟಿದ ದಿನದಂದೇ ನಮ್ಮನ್ನಗಲಿದ ರಾಜೀವ್ ದೀಕ್ಷಿತರ ಮಾತುಗಳು ನಾಡಿನ ಜನತೆಯಲ್ಲಿ ಉಂಟುಮಾಡಿದ ಪರಿಣಾಮ ಅಕ್ಷರಶಃ ಆಚರಣೆಯಲ್ಲಿದೆಯೇ ಹೊರತು ಯಾವುದೇ ಪ್ರಶಸ್ತಿ ಅಥವಾ ಆಡಂಬರದಲ್ಲಿಲ್ಲ. ಅದೇ ಕಾರಣದಿಂದಲೇ ಅವರ ಅಗಲಿಕೆ ಈ ಭವ್ಯ ಭಾರತದ ಯಾವುದೇ ಪೂರ್ವಾಗ್ರಹ ಪೀಡಿತ ಪತ್ರಿಕೆಗಳಲ್ಲಿ ಸುದ್ದಿಯಾಗದೇ ಬರೇ 'ಮಾಹಿತಿ'ಯಾಯಿತು.


ಮನೆಯಲ್ಲಿದ್ದುಕೊಂಡೇ ರಾಷ್ಟ್ರದ ಕೆಲಸ ಮಾಡುವ ಹಂಬಲವಿರುವವರಿಗೆ 'ಸ್ವದೇಶೀ ಬಳಕೆ' ಎಂಬುದು ಹೆಮ್ಮೆಯ ಜೀವನ ಪದ್ದತಿಯಾಯಿತು. 'ಕಲ್ಪನೆ'ಗೆ 'ಆಂದೋಲನ'ದ ರೂಪ ಕೊಟ್ಟು ಇಡೀ ದೇಶದಲ್ಲಿ ಸಂಚಾರ ಮಾಡಿ ತನ್ನ ಮಾತು ಮತ್ತು ತನ್ನ ನಡತೆಗಳ ಮೂಲಕ ಜನರ ಚಿಂತನೆಗಳನ್ನು ನಿರ್ಧಿಷ್ಟ ದಿಕ್ಕಿನತ್ತ ಕೊಂಡೊಯ್ಯುವುದು ಸಾಮಾನ್ಯ ಸಾಧನೆಯಲ್ಲ. ಲೇಖನಗಳ ಮೂಲಕ ಪ್ರಸಿದ್ಧಿಯನ್ನು ಪಡೆಯುವ 'ಗೀಚಣಿಕರಿ'ಗಿಂತ ರಾಜೀವ ದೀಕ್ಷಿತ್ ರಂತಹವರು ಸಾವಿರ ಪಾಲು ಮೇಲು.


ಸ್ವದೇಶೀ ವಸ್ತುಗಳ ಜೊತೆಗೆ ನಮ್ಮ ದೇಶದ ಉತ್ಪನ್ನಗಳಾದ ಖಾದಿ ಬಟ್ಟೆಗಳನ್ನು ಅತ್ಯಂತ ಹೆಮ್ಮೆಯಿಂದ ಬಳಸುವವರ ನಮ್ಮಂತಹ ಅಸಂಖ್ಯ ಯುವಕರನ್ನು ನಿರ್ಮಾಣ ಮಾಡಿದ ರಾಜೀವರ ಪ್ರವಾಸಗಳು ಯಾವ ರಾಷ್ಟ್ರಕೆಲಸಕ್ಕೆ ಕಡಿಮೆ? ಬಹುಶಃ ಗಾಂಧೀಜಿಯವರ ನಂತರ ಖಾದಿ ಬಟ್ಟೆಗೆ 'ಬಳಕೆಯ ಬೆಲೆ' ತಂದುಕೊಡುವಲ್ಲಿ ರಾಜೀವರು ಅಗ್ರಗಣ್ಯರು ಎಂದರೆ ಅತಿಶಯೋಕ್ತಿಯಲ್ಲ.


ಅತ್ಯಂತ ಕಡಿಮೆ ವಯಸ್ಸಿಗೆ ಅಸಂಖ್ಯರ ಮನಸ್ಸಿನಲ್ಲಿ 'ದೇಶೀಯತೆ'ಯ ಛಾಪನ್ನು ಮೂಡಿಸಿ ಇಹಲೋಕ ತ್ಯಜಿಸಿದ 'ರಾಷ್ಟ್ರಬಂಧು ರಾಜೀವ್ ದೀಕ್ಷಿತ'ರಿಗೆ ಅತ್ಯಂತ ಭಾವಪೂರ್ಣ ಶ್ರದ್ಧಾಂಜಲಿ.


-----------------------------------------------------------------------------------------

Dec 21, 2010

'ಓಜಸ್ ನಿಸರ್ಗ' ಎಂಬ ಅಪರೂಪದ ದೇಶೀಯ ಮಳಿಗೆ


ಯಾರಿಗಾದರೂ ಯಾವುದಾದರು ಅಂಗಡಿ ಅಥವಾ ವ್ಯಾಪಾರವನ್ನು ಪ್ರಾರಂಭಿಸಬೇಕು ಎಂದೆನಿಸಿದರೆ ಎಲ್ಲ ರೀತಿಯಲ್ಲೂ ಯೋಚನೆ ಮಾಡಿ ಲಾಭ ಯಾವುದರಲ್ಲಿ ಹೆಚ್ಚು ಅಂತ ಲೆಕ್ಕ ಮಾಡಿಯೇ ಬಹಳಷ್ಟು ಜನರು ಮುಂದುವರೆಯುತ್ತಾರೆ. ಆದ್ದರಿಂದಲೇ ಎಲ್ಲಿ ನೋಡಿದರೂ ಹೋಟೆಲ್ಗಳು, ಆಭರಣ ಮಳಿಗೆಗಳು, ಬೃಹತ್ ವ್ಯಾಪಾರ ಮಳಿಗೆಗಳು (ಶಾಪಿಂಗ್ ಕಾಂಪ್ಲೆಕ್ಸ್) ತಲೆ ಎತ್ತಿ ನಿಂತಿದೆ. ಅಷ್ಟೇ ಅಲ್ಲದೆ ಜನರ ತಲೆ ಕೆಲಸ ಮಾಡದಿರುವಂತೆಯೂ ಮಾಡಿದೆ! ಆದರೆ ಇಲ್ಲೊಂದು ವಿಶೇಷ ತಂಡವಿದೆ. ತಾವು ಸಮಾಜದ ಒಳಿತನ ಬಗೆಗೆ ಬರೀ ಮಾತಾಡುವವರಿಗಿಂತ ಭಿನ್ನವಾಗಿ ಚಿಂತಿಸಿ ಅದನ್ನು ಕಾರ್ಯರೂಪಕ್ಕೂ ತಂದಿದ್ದಾರೆ. ಸಮಾಜದ ಬಗೆಗಿರುವ ಕಾಳಜಿಯನ್ನು ಅಭಿವ್ಯಕ್ತಗೊಳಿಸಿದ್ದಾರೆ. ಈ ಎಲ್ಲ ಸದುದ್ದೇಶ ಗಳ ಫಲವೇ 'ಓಜಸ್ ನಿಸರ್ಗ' ಎಂಬ ಸಾವಯವ ಹಾಗು ನೈಸರ್ಗಿಕ ಉತ್ಪನ್ನಗಳ ಪುಟ್ಟ ಮಳಿಗೆ.



ಇದರ ವಿಶೇಷ ಎಂದರೆ ಯಾವುದೇ ಕೃತಕ ರಾಸಾಯನಿಕಗಳನ್ನು ಹಾಗು ಕ್ರಿಮಿನಾಶಕಗಳನ್ನು ಬಳಸದೆ ಬೆಳೆದಂತಹ ತರಕಾರಿಗಳು, ಧವಸ ಧಾನ್ಯಗಳು, ದೇಶೀಯ ವಸ್ತುಗಳು, ಸ್ಥಾನೀಯವಾಗಿ ತಯಾರಿಸಲ್ಪಟ್ಟ ವಸ್ತುಗಳಿಗೆ ಪುಟ್ಟ ಮಾರುಕಟ್ಟೆಯ ರೂಪವನ್ನು ಕೊಟ್ಟಿದ್ದಾರೆ. ಕೊಳ್ಳುವ ವಸ್ತುಗಳಿಗೆ ದೇಶೀಯತೆಯ ಹಾಗು ರಾಷ್ಟ್ರೀಯತೆಯ ಗಂಧವನ್ನು ಲೇಪಿಸಿದ್ದಾರೆ. ಮನೆಯಲ್ಲಿದ್ದುಕೊಂಡೇ ರಾಷ್ಟ್ರದ ಕೆಲಸ ಮಾಡಬೇಕೆನ್ನುವ ಹಂಬಲಿಗರಿಗೆ ಅವಕಾಶವನ್ನು ನೀಡಿದ್ದಾರೆ.



ಎಲ್ಲರಿಗಿಂತ ಭಿನ್ನವಾಗಿ ಆದರೆ ಆ ಭಿನ್ನತೆಯಲ್ಲೂ ಶ್ರೇಷ್ಠತೆಯನ್ನು ಹಾಗು ರಾಷ್ಟ್ರೀಯತೆಯನ್ನು ಅಳವಡಿಸಿಕೊಂಡಿರುವ 'ಓಜಸ್ ನಿಸರ್ಗ' ತಂಡಕ್ಕೆ ನಾವೆಲ್ಲರೂ ಅಭಿನಂದನೆಯನ್ನು ಸಲ್ಲಿಸಲೇಬೇಕು. ಅದಷ್ಟೇ ಅಲ್ಲ. ನಾವು ಸಹ 'ಓಜಸ್ ನಿಸರ್ಗ'ಕ್ಕೆ ಭೇಟಿ ನೀಡಿ ನಮ್ಮ ದೇಶೀಯ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ನಮ್ಮ ಹಸ್ತವನ್ನೂ 'ಓಜಸ್ ನಿಸರ್ಗ' ತಂಡದೊಂದಿಗೆ ಜೋಡಿಸಬೇಕು. ಅದರಲ್ಲೂ ಮುಖ್ಯವಾಗಿ ದಿನೋಪಯೋಗಿ ವಸ್ತುಗಳನ್ನು 'ಓಜಸ್ ನಿಸರ್ಗ'ದಲ್ಲೇ ಕೊಂಡುಕೊಳ್ಳುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಈ ಭೂಮಿ ಹಾಗು ಪ್ರಕೃತಿಯೊಡಗಿನ ನಮ್ಮ ಸಂಭಂಧವನ್ನ ಉತ್ತಮಗೊಳಿಸುವ ಹಾಗು ನಮ್ಮ ಕಾಳಜಿಯನ್ನ ಪ್ರತ್ಯಕ್ಷ ಆಚರಣೆಗೆ ತರುವ ಪ್ರಯತ್ನ ನಮ್ಮೆಲ್ಲರಿಂದ ಆಗಬೇಕು ಎಂಬುದೇ ಅಪೇಕ್ಷೆ. ಸಮಾಜದ ಬಗ್ಗೆ ಹಾಗು ದೇಶದ ಬಗ್ಗೆ ಬರೇ ಮಾತಾಡುವವರ ನಡುವೆ ಭಿನ್ನತೆಯನ್ನು ಮೆರೆಯೋಣ. ಮಾಹಿತಿಗಾಗಿ ಲಗತ್ತಿಸಿರುವ ಪತ್ರಕವನ್ನು ನೋಡಿ.



ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ http://www.ojasnisarga.com/




----------------------------------------------------------------------------