Jun 11, 2010

ಜನತೆಯಿಂದ ಕಿತ್ತುಕೊಳ್ಳದಿರಲಿ...


ಸಾಕಷ್ಟು ದೊಡ್ಡದಾಗಿಯೇ 'ಹೂಡಿಕೆದಾರರ ಸಮಾವೇಶ'ವನ್ನು ನಮ್ಮ ಕರ್ನಾಟಕ ಘನ ಸರಕಾರ ನಡೆಸಿ ಹಲವಾರು ಜನರ ಬಳಿ ಸೈ ಎನಿಸಿಕೊಂಡಿದೆ. ಯಥಾ ಪ್ರಕಾರ ಕೆಲವರು ವಿರೋಧಿಸಿದ್ದುದು ಸಹಜವೇ. ನಡೆದ ಸಮಾವೇಶದ ಹಿಂದೆ ಸ್ವಾರ್ಥದ ಜತೆಗೆ ರಾಜ್ಯದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ 'ರಾಜ್ಯಾಭಿಮಾನ'ವನ್ನು ಹೊತ್ತ ಸಚಿವರು ಹಾಗು ಮುಖ್ಯಮಂತ್ರಿಗಳ ಸಾಕಷ್ಟು ಪರಿಶ್ರಮ ಇದೆ ಎಂಬುದು ಅಷ್ಟೇ ಸತ್ಯ. ಈ ಕಾರಣಕ್ಕೆ ಮುಖ್ಯಮಂತ್ರಿಗಳು ಹಾಗು ಸಚಿವರಾದ ಮುರುಗೇಶ್ ನಿರಾಣಿಯವರು ಅಭಿನಂದನಾರ್ಹರು. ರಾಜ್ಯಕ್ಕೆ ಕೈಗಾರಿಕೆಗಳು ಬರುವುದರಿಂದ ಸಾಕಷ್ಟು ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ.


ಆದರೆ, ಪ್ರಸ್ತುತ ರಾಜ್ಯದ ಜನತೆಗೆ ಸಿಗುತ್ತಿರುವ ನೀರು ಕುಡಿಯಲಿಕ್ಕೆ ಸಾಕಾದರೆ ಹೆಚ್ಚು. ವಿದ್ಯುತನ್ನಂತೂ ಕೇಳಲೇಬೇಡಿ. ಉತ್ತರ ಕರ್ನಾಟಕದಲ್ಲಂತೂ ನೀರಿಗೇ ಹಾಹಾಕಾರದಂತಹ ಪರಿಸ್ಥಿತಿ. ಇಂತಹ ಸಮಯದಲ್ಲಿ ಬಂಡವಾಳ ಹರಿದು ಬರುತ್ತದೆ ಎಂಬ ಭರಾಟೆಯಲ್ಲಿ ರಾಜ್ಯದ ಜನತೆಗೆ ಸಿಗ್ಗುತಿರುವ ಅಲ್ಪದರಲ್ಲೇ ಕಿತ್ತುಕೊಂಡು ಹೂಡಿಕೆದಾರರ ಪೂರೈಕೆಯನ್ನು ನಿಗಿಸುವ ವಿವೇಕರಹಿತ ಹಾಗು ಅಮಾನವೀಯ ನಿರ್ಧಾರಕ್ಕೆ ಮಾತ್ರ ರಾಜ್ಯ ಸರ್ಕಾರ ಮುಂದಾಗದಿರಲಿ ಎಂಬುದೇ ಜನತೆಯ ನಿರೀಕ್ಷೆ ಹಾಗು ಕೋರಿಕೆ. ಈಗಾಗಲೇ ನೈಸ್ ಯೋಜನೆಯಲ್ಲಿ ತಪ್ಪೆಸಗಿರುವ ರಾಜ್ಯ ಸರ್ಕಾರ ಮತ್ತೊಮ್ಮೆ ಈ ವಿಷಯದಲ್ಲೂ ಫಲವತ್ತಾದ ಕೃಷಿ ಭೂಮಿಯನ್ನೇನಾದರೂ ಮಾರಿದರೆ ರಾಜ್ಯದ ಜನತೆಗೆ ಮೋಸ ಮಾಡಿದಂತೆ. ಹಾಗಾಗದಿರಲಿ ಎಂಬುದು ನಮ್ಮ ಆಗ್ರಹ.

ಈ ಎಲ್ಲ ಕಾರಣಕ್ಕೋಸ್ಕರ, ರಾಜ್ಯದ ಸಾಮರ್ಥ್ಯಕ್ಕೆ ಅನುಗುಣವಾಗಿಯೇ ಸರಕಾರ ಹೂಡಿಕೆದಾರರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಿ, ರಾಜ್ಯದ ಅಭಿವೃದ್ಧಿ ಸಕಾರಾತ್ಮಕ ರೀತಿಯಲ್ಲಿ ಮುಂದುವರೆಯಲಿ.

--