'ನಾನು ಮುಂಬೈನವ ಎಂಬುದಕ್ಕಿಂತ ಮೊದಲು ನಾನು ಭಾರತೀಯ' ಎಂದು ಯಾರಾದರೂ ಹೇಳಿದರೆ, ಹೇಳಿದವನು ಬಹುಶಃ ದೇಶಕ್ಕೊಸ್ಕರವೇ ಹುಟ್ಟಿದವನಿರಬೇಕು, ದೇಶಸೇವೆಯಲ್ಲೇ ಸದಾ ಮುಳುಗಿರುವವನಿರಬೇಕು, ದೇಶವಾಸಿಗಳೆಂದರೆ ಎಲ್ಲಿಲ್ಲದ ಅಭಿಮಾನವನ್ನು ಇಟ್ಟುಕೊಂಡಿರುವವನಿರಬೇಕು ಎಂದೆಲ್ಲ ಕೆಲವರಿಗೆ ಅನಿಸಬಹುದು. ಅಥವಾ ಅವನೊಬ್ಬ 'ಸೇನಾಯೋಧ' ಎಂದೂ ಕೆಲವರಿಗೆ ಅನಿಸುವ ಸಾಧ್ಯತೆಗಳಿವೆ!.
ಆದರೆ ಮೇಲಿನ ಹೇಳಿಕೆ ನೀಡಿದವ ಆ ಪರಿ ಮೂರ್ಖನಲ್ಲ ಬಿಡಿ!
ಸಚಿನ್ ತೆಂಡೂಲ್ಕರ್, ಹೆಸರು ಕೇಳಿದರೆ ಇಡೀ ಕ್ರೀಡಾ ಜಗತ್ತು ಕಾತುರವಾಗುತ್ತದೆ. ಜನ ಅವನ ಆಟಕ್ಕೋಸ್ಕರ ಮುಗಿಮುಗಿದು ಬಿಳುತ್ತಾರೆ. 'ವಿಶ್ವ ದಾಖಲೆ'ಗಳ ಸರದಾರ ಎಂದು ಕೊಂಡಾಡುತ್ತಾರೆ. ಮನೆಯಲ್ಲೆಲ್ಲ ಅವನ ಫೋಟೋಗಳನ್ನಿಟ್ಟು ಪೂಜಿಸುತ್ತಾರೆ. ಅಭಿಮಾನದಿಂದ ಬೀಗುತ್ತಾರೆ. 'ನಮ್ಮ ಸಚಿನ್' ಎಂದು ಮನೆಮಗನ ಹುಟ್ಟಿದಬ್ಬದಂತೆ ಅವನ ಹುಟ್ಟಿದಬ್ಬವನ್ನು ಸಂಭ್ರಮದಿಂದ ಆಚರಿಸುವವರಿದ್ದಾರೆ. ಅವನ ಆಟದ ವಿಷಯದಲ್ಲಿ ಅವನು ವಿಶ್ವಶ್ರೇಷ್ಠ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಮಾತ್ರಕ್ಕೆ ಅವನನ್ನು ದೇಶದ ಮಹಾನ್ ವ್ಯಕ್ತಿಯಂತೆ, ದೇಶಕ್ಕೆ ಸಿಕ್ಕಾಪಟ್ಟೆ ಕೊಡುಗೆ ನೀಡಿದವನಂತೆ, ಮಹಾನ್ 'ದೇಶಭಕ್ತ'ನಂತೆ ಬಿಂಬಿಸುವುದು ಎಷ್ಟು ಸರಿ?
ಸಚಿನ್ ತೆಂಡೂಲ್ಕರ್ ನ ಮೇಲಿನ ಹೇಳಿಕೆಯ ಕುರಿತು ಯಥಾ ಪ್ರಕಾರ ಸ್ವಘೋಷಿತ ಭಾಷಾಭಿಮಾನಿಗಳು ತಮ್ಮ ಎಂದಿನ ದುರಭಿಮಾನವನ್ನು ಪ್ರದರ್ಶಿಸುತ್ತಿರುವುದು, ಪುಕ್ಕಟೆ ಪ್ರಚಾರವನ್ನು ಪಡೆಯುತ್ತಾ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿರುವುದು ದುರದೃಷ್ಟವೇ ಸರಿ.
'ನಮ್ಮ ಗ್ರಾಮ', 'ನಮ್ಮ ಊರು', 'ನಮ್ಮ ಜಿಲ್ಲೆ', 'ನಮ್ಮ ಭಾಷೆ' ಎಂಬ ಅಭಿಮಾನವಿಲ್ಲದಿರುವವರಿಗೆ 'ನಮ್ಮ ದೇಶ' ಎಂಬ 'ಅಭಿಮಾನ' ಎಲ್ಲಿಂದ ಸಿಗುತ್ತದೆ, ಅದೂ ತಕ್ಷಣಕ್ಕೆ! ಎಂಬುದೇ ನನ್ನ ಪ್ರಶ್ನೆ. ಅಂದ ಮಾತ್ರಕ್ಕೆ ಭಾಷಾಭಿಮಾನದ ಹೆಸರಿನಲ್ಲಿ ಗೂಂಡಾಗಿರಿ ಮಾಡುವವರೆಲ್ಲರಿಗೂ ದೇಶಾಭಿಮಾನವಿದೆಯೆಂದಲ್ಲ. ಭಾಷೆಯ ಹೆಸರಿನಲ್ಲಿ ತಮ್ಮ ಸ್ವಾರ್ಥವನ್ನು ಈಡೇರಿಸಿಕೊಳ್ಳುವವರನ್ನು ಖಂಡಿತ ಶಿಕ್ಷಿಸಬೇಕು. ಅದರಲ್ಲಿ ಎರಡು ಮಾತಿಲ್ಲ. ಆದರೆ 'ನಮ್ಮ ಭಾಷೆ', 'ನಮ್ಮ ರಾಜ್ಯ' ಎಂಬ ಅಭಿಮಾನವಿಲ್ಲದಿರುವವನ 'ನಮ್ಮ ದೇಶ' ಎಂಬ ಅಭಿಮಾನದ ಹಿಂದಿನ ನಿಷ್ಠೆಯನ್ನು ಹೇಗೆ ತಾನೇ ನಂಬಲಾದೀತು?
ಭಾಷಾಭಿಮಾನದ, ಸ್ವರಾಜ್ಯಾಭಿಮಾನದ ಹೊರತಾಗಿ ದೇಶಾಭಿಮಾನ ಎಂದಿಗಾದರೂ ಪರಿಪೂರ್ಣತೆಯನ್ನು ಹೊಂದಲು ಸಾಧ್ಯವೇ? ಅಆಇಈ ಕಲಿಯದವನು ಕವನ ಬರೆಯಲು ಸಾಧ್ಯವೇ? ತನಗೆ ತಾನು ಪ್ರಾಮಾಣಿಕನಾಗದವನು ದೇಶಕ್ಕೆ ಹೇಗೆ ತಾನೇ ಪ್ರಾಮಾಣಿಕನಾದಾನು? ತನ್ನೂರಿಗೇ ಆಸ್ತಿಯಾಗದವ ದೇಶಕ್ಕೆ ಆಸ್ತಿಯಾದಾನೆ?
ಅಂದ ಮಾತ್ರಕ್ಕೆ ಸಚಿನ್ ರವರಿಗೆ ಭಾಷಾಭಿಮಾನದ, ಸ್ವರಾಜ್ಯಾಭಿಮಾನಗಳು ಇಲ್ಲವೆಂದಲ್ಲ. ಉಳಿದವರಿಗಿಂತ ಹೆಚ್ಚಿರಲೂಬಹುದು. ಆದರೆ ಭಾಷೆ, ರಾಜ್ಯದ ಮೇಲಿನ ಶ್ರದ್ಧಾ-ಭಕ್ತಿ-ಅಭಿಮಾನಗಳು ದೇಶಾಭಿಮಾನಕ್ಕೆ ಸ್ಫೂರ್ತಿಯಾಗಿ ಮಾರ್ಪಡುತ್ತವೆ. ಆದರೆ ಭಾಷಾಭಿಮಾನದ ಹೆಸರಿನಲ್ಲಿ ನಡೆಯುವ ಎಲ್ಲವನ್ನು ಒಪ್ಪಲು ಸಾಧ್ಯವಿಲ್ಲ. ದೇಶದ ಹಿತಕ್ಕೆ ಧಕ್ಕೆಯಾಗದಂತೆ, ದೇಶದ ಸಮಗ್ರತೆಗೆ ಚ್ಯುತಿಯಾಗದಂತೆ ಭಾಷಾಭಿಮಾನದ ಆಚರಣೆ ಖಂಡಿತ ಅವಶ್ಯವಿದೆ. ಅನಿವಾರ್ಯವೂ ಹೌದು.