ಈಗ ಪ್ರಸ್ತುತ ಸುದ್ದಿಯಲ್ಲಿರುವ ಜಿನ್ನಾ ಭಜನೆಗೆ ಬಲಿಯಾದ ಜಸ್ವಂತ್ ಸಿಂಗ್, ತಾವೊಬ್ಬ ಸೇನಾನಿಯಾಗಿದ್ದರು ಎಂಬುದನ್ನು ಮರೆತು ನಡೆದುಕೊಳ್ಳುತ್ತಿದ್ದಾರೆ. ಉಚ್ಚಾಟನೆಯಾದದ್ದಕ್ಕೆ ಪಕ್ಷದ ಆಂತರಿಕ ವಿಷಯಗಳನ್ನ, ವಿವಾದಗಳನ್ನು ಹುಟ್ಟಿಸುವ ವಿಷಯಗಳನ್ನ ಮಾಧ್ಯಮಗಳ ಮುಂದೆ ಬೊಂಬಡಿಸುತ್ತ 'ಪ್ರತೀಕಾರ'ದ ಪೋಸು ಕೊಡುತ್ತಿದ್ದಾರೆ!
ಆರೋಗ್ಯಕರವಾಗಿ ಬಗೆಹರಿಸಿಕೊಳ್ಳಬಹುದಾದಂತಹ ವಿಷಯಗಳನ್ನ ಸಮಸ್ಯೆಗಳನ್ನಾಗಿ ಪರಿವರ್ತಿಸುತ್ತ ತಮ್ಮ 'ಸ್ವಾರ್ಥ'ದ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವ ಬಿಜೆಪಿಯಲ್ಲಿ 'ಗುಂಪುಗಾರಿಕಾದಾರ'ರಿಗೆ ಲಗಾಮು ಹಾಕುವವರು ಯಾರು?
ಬೆಜೆಪಿಯ ಪ್ರತಿಯೊಂದು ಗೆಲುವಿನ ಹಿಂದೆ ಎಷ್ಟು ನಿಸ್ವಾರ್ಥ ಸ್ವಯಂಸೇವಕರ ಶ್ರಮ ಇರುತ್ತದೆ ಎಂದು ಯಾವ ನಾಯಕನಾದರೂ ಅರ್ಥಮಾಡಿಕೊಳ್ಳುತ್ತಾರಾ? ಬಿಜೆಪಿಗೆ ಮತ ಹಾಕುವುದನ್ನು ದೇಶದ ಕೆಲಸ ಅಂತ ಭಾವಿಸಿರುವವರೆಷ್ಟೋ ಮಂದಿ! ಬಿಜೆಪಿ ಅಧಿಕಾರಕ್ಕೆ ಬಂದರೆ ನಮ್ಮ ದೇಶ ಪರಮ ವೈಭವದ ಸ್ಥಿತಿ ತಲುಪುವುದು ಸಲೀಸು ಎಂದು ಸಿಕ್ಕಾಪಟ್ಟೆ ನಂಬಿರುವ ಮೂರ್ಖರು ಅಸಂಖ್ಯರು! ತಮ್ಮ ದೇಶಭಕ್ತಿಯ ಅಭಿವ್ಯಕ್ತತೆಯಡಿಯಲ್ಲಿ 'ಬಿಜೆಪಿಗೆ ಮತ'ವನ್ನು ಸೇರಿಸಿರುವ ಭಾರತದ ಪ್ರಜೆಗಳಿಗೆಲ್ಲ ಈಗ ಬಿದ್ದಿದೆ ಕೆರದಾಗಿನ ಏಟು!
ಇಷ್ಟು ದಿನ ಬಿಜೆಪಿಯನ್ನು ನಿಸ್ವಾರ್ಥದಿಂದ, ದೇಶಕ್ಕೋಸ್ಕರ ಬೆಂಬಲಿಸುತ್ತಿದ್ದವರಿಗೆ ಮನದಲ್ಲಿ ಎದ್ದಿರುವ ಉತ್ತರಕಾನದ ಪ್ರಶ್ನೆ 'ನಾವು ಯಾಕೆ ಬಿಜೆಪಿಯನ್ನು ಬೆಂಬಲಿಸುತ್ತಿದ್ದೆವು?' ಎಂದು. ಹಾಗೆಯೇ ಅವರೆಲ್ಲರಿಗೂ ಕಾಡುತ್ತಿರುವ ಹಾಗು ದುಃಖಿಸುತ್ತಿರುವ ಪ್ರಶ್ನೆ 'ಇನ್ಮೇಲೆ ನಮ್ಮ ದೇಶವನ್ನು ರಾಜಕೀಯವಾಗಿ ಔನ್ನತ್ಯಕ್ಕೇರಿಸಲು ಯಾರನ್ನು ನಂಬಬೇಕು?'
ಹಿಂದೆ ನನ್ನೊಬ್ಬ ಪರಿಚಿತರೊಬ್ಬರ ಜತೆ ಮಾತಾಡುತ್ತಿರುವಾಗ ಬಂದ ಮಾತು 'ಬಿಜೆಪಿಯಲ್ಲಿರುವ ಹಲವಾರು ಮಂದಿ ಆರೆಸ್ಸೆಸ್ ಹಿನ್ನೆಲೆಯುಳ್ಳವರಾಗಿರುವರಿಂದ ಅವರ ದೇಶದೆಡೆಗಿನ ಬದ್ಧತೆಯನ್ನು ನಂಬಿ ನಮ್ಮ ದೇಶವನ್ನು ಜಗತ್ತಿನ ಪ್ರಬಲ ರಾಷ್ಟ್ರವನ್ನಾಗಿಸುವುದರಲ್ಲಿ ನಾವು ಪ್ರಮುಖ ಪಾತ್ರ ವಹಿಸಬೇಕು' ಎಂದು. ಆದರೆ ಈಗ ಬರಿ ಕಳ್ಳ-ಕಾಕರು, ದರೋಡೆಕೋರರು ತುಂಬಿರುವ ಬಿಜೆಪಿಯ ಶಾಸಕ, ಸಂಸದರ ಶೇ.೯೦ರಷ್ಟು ಮಂದಿಗೆ ಎರಡಂಕಿ ಕೋಟಿರುಪಾಯಿಯ ಕೆಳಗಿದ್ದಂತಿಲ್ಲ!
ಆದರೆ ಒಂದಂತೂ ನಿಜ. ಬಿಜೆಪಿ ಈ ಸಂದರ್ಭವನ್ನು ನಾಂದಿಯನ್ನಾಗಿಸಿಕೊಂಡು ಆಮೂಲಾಗ್ರ ಬದಲಾವಣೆಯೊಂದಿಗೆ ಪೂರ್ಣಪ್ರಮಾಣದ ಪ್ರಾಮಾಣಿಕ 'ದೇಶಭಕ್ತಿ'ಯ ಉದ್ದೀಪನದೊಂದಿಗೆ ಎದ್ದು ಬರದಿದ್ದರೆ ದೇಶದ ಉಜ್ವಲ ಭವಿಷ್ಯವನ್ನು ಎದಿರುಕಾಣುತ್ತಿರುವ ನಮ್ಮಂತಹ ಅಸಂಖ್ಯಾತ ಪ್ರಜೆಗಳ ಕನಸು ನನಸಾಗುವುದು ಯಾವಾಗ?