Apr 27, 2009

ಮತಚಲಾವಣೆ ಮಾಡದಿರುವವರನ್ನು ಕೇಳುವವರಾರು?

ರಾಜಕಾರಣಿಗಳ ಭ್ರಷ್ಟತೆಯ ಬಗ್ಗೆ, ಅವರ ನಡವಳಿಕೆಯ ಬಗ್ಗೆ, ಅವರ ಕಾರ್ಯಗಳ ಬಗ್ಗೆ, ಅವರು ಲೂಟಿಗೈದ ರಾಷ್ಟ್ರದ ಹಣದ ಬಗ್ಗೆ, ಅವರ ವೈಯಕ್ತಿಕ ವಿಷಯಗಳ ಬಗೆಗೂ ಮಾತನಾಡುವುದು ಸುಲಭ, ಸರಿ ಹಾಗು ಅವಶ್ಯ ಎನ್ನುವವರೂ ಇದ್ದಾರೆ. ಏಕೆಂದರೆ ಸಾರ್ವಜನಿಕ ಜೀವನ(!)ದಲ್ಲಿರುವವರ ಅದರಲ್ಲೂ ಜನಪ್ರತಿನಿಧಿಗಳ ಬಗ್ಗೆ ಮಾತನಾಡುವ ಹಾಗೂ ಪ್ರಶ್ನಿಸುವ ಹಕ್ಕು ಪ್ರಜೆಗಳಿಗಿರುವುದು ನಿಜ.

ಆದರೆ, ಈ ದೇಶದ ಪ್ರತಿಯೊಬ್ಬ ಪ್ರಜೆಯ ಮುಖ್ಯ ಕರ್ತವ್ಯವಾದ ಮತಚಲಾವಣೆಯೊಂದಿಗೆ ಇರುವ ಕೊಳ್ಳೆಬಾಕರಲ್ಲೇ ಕಡಿಮೆ ಕೊಳ್ಳೆಹೊಡೆಯುವವರನ್ನ, ರಾಜ್ಯವನ್ನು ಲೂಟಿಮಾಡಿಕೊಂಡೆ ಅಲ್ಪ-ಸ್ವಲ್ಪ ರಾಜ್ಯದ ಕೆಲಸ ಮಾಡುವವರನ್ನ, ಇದ್ದುದರಲ್ಲೇ ಸ್ವಲ್ಪ ಉತ್ತಮ ಚಾರಿತ್ರ್ಯ ಹೊಂದಿದವರನ್ನ, ಇದ್ದುದರಲ್ಲೇ ರಾಜ್ಯದ-ರಾಷ್ಟ್ರದ ಕುರಿತಾಗಿ ಕಿಂಚಿತ್ ಕಾಳಜಿಯಿರುವವರನ್ನ ಆಯ್ಕೆ ಮಾಡುವ ಕಾರ್ಯದಲ್ಲಿ ಪಾಲ್ಗೊಳ್ಳದ ಪ್ರಜೆ(!)ಗಳನ್ನು ಪ್ರಶ್ನಿಸುವವರು ಯಾರು?

ಮತಚಲಾವಣೆಯ ಕುರಿತಾಗಿ ಹಲವರಿಗೆ ಅಸಡ್ಡೆಯ ಭಾವನೆಯಿರುವ ವಿಷಯದಲ್ಲಿ ಭ್ರಷ್ಟ, ಹೊಟ್ಟೆಬಾಕ ರಾಜಕಾರಣಿಗಳ ಪಾತ್ರ ಎಷ್ಟು ಹಿರಿದೋ, ಮತಚಲಾಯಿಸದ ಪ್ರಜ್ಞಾವಂತ ಪ್ರಜೆಗಳ ಪಾತ್ರವೂ ಅಷ್ಟೇ ಹಿರಿದು.

ಜಗತ್ತಿನ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಶೇ.೫೦ ರಿಂದ ಶೇ.೬೦ ಎನ್ನುವ ವಿಷಯ ಯಾರ ಮನಸ್ಸನ್ನೂ ಆವರಿಸಿದಿರುವವರ ಮಟ್ಟಿಗೆ ನಮ್ಮ ದೇಶದಲ್ಲಿ ಪ್ರಜೆಗಳ ಸಂಖ್ಯೆ ಹಾಗು ವ್ಯಕ್ತಿಗಳ ಸಂಖ್ಯೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ!

ಈ ರಾಷ್ಟ್ರ ಹಾಗು ಈ ರಾಷ್ಟ್ರದ ಪ್ರಜೆಗಳ ನಡುವೆ ಪವಿತ್ರವಾದ ಹಾಗು ಅಚಲವಾದ ಭಾವನಾತ್ಮಕ ಸಂಬಂಧ ಬೆಳೆಯುವುದು ಹಾಗು ಬೆಳೆಸುವುದೇ ಎಲ್ಲ ರಾಷ್ಟ್ರೀಯ ಸಮಸ್ಯೆಗಳಿಗೆ ಏಕಮೇವ ಪರಿಹಾರ ಎಂದು ಎಲ್ಲರಿಗೂ ಅರ್ಥವಾಗುವುದು ಯಾವಾಗ?

Apr 5, 2009

ರಾಜ್ಯ ರಾಜಕಾರಣ - ರಾಜ್ಯದ ಮಾನ ಹರಣ

ಯಾವೊಬ್ಬ ರಾಜಕಾರಣಿಗಾದರೂ ನಾಚಿಕೆ-ಮಾನ-ಮರ್ಯಾದೆಗಳೇನಾದರೂ ಇದ್ದಿದ್ದರೆ ನಮ್ಮ ರಾಜ್ಯದಲ್ಲಿ ಇ ಮಟ್ಟದ ಹೊಲಸು ರಾಜಕಾರಣ ಇರುತ್ತಿರಲಿಲ್ಲ! ಇಂದಿದ್ದ ಪಕ್ಷದಲ್ಲಿ ನಾಳೆ ಇರುವುದಿಲ್ಲ! ಇದೂ ಒಂದು ಜೀವನವಾ? ಎಲ್ಲರಿಗೂ ಬಂಗಾರಪ್ಪನವರೇ ಆದರ್ಶವಾದರೆ ರಾಜ್ಯದ ಗತಿ?

ಭಾರತೀಯ ಜನತಾ ಪಕ್ಷ ಈ ಸಲ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂಬ ಕನಸು ಕಂಡವರೆಲ್ಲರೂ ತಮ್ಮ ಸಂಸಾರ ಸಮೇತ ಹೊರಟಿದ್ದೆ ಹರಟಿದ್ದು! ಒಂದು ಕಾಲದಲ್ಲಿ 'ಜಾತ್ಯಾತೀತವಾದ' ಎಂಬ ಜಾತೀವಾದದ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುತ್ತಿದ್ದ, ಬಿಜೆಪಿಯನ್ನ 'ಕೋಮುವಾದಿ' ಎಂದು ಬಣ್ಣಿಸುತ್ತಿದ್ದ 'ಸೆಕ್ಯುಲರ್ ಲೀಡರ್'ಗಳು ಈಗ ಅದೇ ಪಕ್ಷದ ಹಿಂದೆ ಅಧಿಕಾರದ ಜೊಲ್ಲು ಸುರಿಸುತ್ತ ಯಾವ ಅಳುಕೂ ಇಲ್ಲದೆ ಹೋಗುತ್ತಿದ್ದಾರೆ, ಛೆ! ಒಬ್ಬರಿಗಾದರೂ ನಿಯತ್ತು ಅನ್ನೋದು ಇದೆಯಾ?

'ರಾಷ್ಟ್ರೀಯ ಚಾರಿತ್ರ್ಯ'ವನ್ನು ತನ್ನ ಸಿದ್ಧಾಂತದ ಆಧಾರ ಎಂದೇ ಬಿಂಬಿಸಿರುವ ಬಿಜೆಪಿ ಕೂಡ, 'ರಾಷ್ಟ್ರೀಯತೆ'ಯನ್ನೇ ಅನುಮಾನದಿಂದ ನೋಡುವವರನ್ನೆಲ್ಲಾ ಆಲಿಂಗಿಸಿ, 'ಅಧಿಕಾರವೇ ತನ್ನ ಅನಿವಾರ್ಯತೆ' ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದೆ. ತನ್ನ ಸಿದ್ದಾಂತದ ಜತೆಗೆ ಪರೋಕ್ಷವಾಗಿ 'ರಾಜೀ' ಮಾಡಿಕೊಳ್ಳುವತ್ತ ಸಾಗಿದೆ.