Mar 22, 2009

ಪಕ್ಷಾತೀತ ಸ್ಥಾನಕ್ಕೆ 'ಪಕ್ಷ ನಿಷ್ಠ' ವ್ಯಕ್ತಿ!

ಇಡೀ ದೇಶಕ್ಕೆ ದೇಶವೇ ಅನುಮಾನ ಪಡುತ್ತಿರುವ ನವೀನ್ ಚಾವ್ಲಾರವರನ್ನು ದೇಶದ ಅತ್ಯಂತ ಮುಖ್ಯವಾದ, ಸಂವಿಧಾನದ ಗೌರವಗಳನ್ನು ಎತ್ತಿ ಹಿಡಿಯುವ ಅತ್ಯಂತ ಜವಾಬ್ದಾರಿಯುತವಾದ ಹುದ್ದೆಯಾದಂತಹ 'ಮುಖ್ಯ ಚುನಾವಣಾ ಆಯುಕ್ತ'ರ ಸ್ಥಾನಕ್ಕೆ ಹಲವಾರು ಪ್ರತಿರೋಧಗಳ ಹಾಗು ಅದಕ್ಕಿಂತ ಹೆಚ್ಚಾಗಿ ಅವರ ವಿರುದ್ಧದ ಆಪಾದನೆಗಳ ನಡುವೆಯೂ ಅವರನ್ನೇ ಸುಉಚಿಸಿರುವುದು ಕಾಂಗ್ರೆಸ್ಸಿನ ಸ್ವಾರ್ಥ ರಾಜಕಾರಣಕ್ಕೆ ಉತ್ತಮ ನಿದರ್ಶನವಾಗಿದೆ.

ಯಾರು ಆಪಾದನೆ ಮಾಡಿದರೇನು? ಅವುಗಳನ್ನು ದೇಶದ ಮುಂದೆ ಸುಳ್ಳೆಂದು ಸಾಬೀತು ಪಡಿಸಿದ ನಂತರ ಅವರನ್ನು ಮುಖ್ಯ ಚುನಾವಣಾ ಆಯುಕ್ತರ ಸ್ಥಾನಕ್ಕೆ ಸೂಚಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಹಾಗು ತನ್ನ ಘನತೆಗೆ ತಕ್ಕ ಗೌರವ.

ನವೀನ್ ಚಾವ್ಲಾರವರು ಕಾಂಗ್ರೆಸ್ ಪಕ್ಷದ ಪರವಾಗಿ ವರ್ತಿಸುತ್ತಿರುವುದು ಹಾಗೂ ವರ್ತಿಸಿರುವುದಕ್ಕೆ ಹಲವಾರು ದಾಖಲೆಗಳು ಇರುವಾಗಲೂ, ಅವುಗಳ ಬಗೆಗೆ ಪತ್ರಿಕೆಗಳಲ್ಲಿ ಬಂದ ನಂತರವೂ, ಈ ವಿಷಯವಾಗಿ ಯಾವುದೇ ತನಿಖೆಗಳಿಲ್ಲದೆ ಕೇಂದ್ರ ಸರ್ಕಾರ ಅತ್ಯಂತ ರಾಜಾರೋಷವಾಗಿಯೇ 'ನವೀನ್ ಚಾವ್ಲಾರವರೆ ಮುಂದಿನ ಚುನಾವಣಾ ಆಯುಕ್ತ' ಎಂದು ಘೋಷಿಸಿರುವುದು ಭಾರತದ ಸಂವಿಧಾನಕ್ಕೆ ಮಾಡಿದ ಅಪಚಾರವಲ್ಲದೆ ಮತ್ತೇನು?

ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಪಕ್ಷಾತೀತವಾಗಿ ಕೆಲಸ ನಿರ್ವಹಿಸಬೇಕಾದಂತಹ ನವೀನ್ ಚಾವ್ಲಾರವರು ಆಗಲೇ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವುದು 'ದಾಖಲೆ'ಗಳಿಂದ ತೋರಿಸಲ್ಪಟ್ಟಿರುವುದು ದೇಶದ ಘನತೆಗೇ ಅಗೌರವ!

ಬರೇ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದರು ಎಂಬ ಒಂದೇ ಕಾರಣಕ್ಕೆ ಪ್ರತಿಭಾ ಪಾಟೀಲ್ ಎಂಬವರು ರಾಷ್ಟ್ರಪತಿಯಾಗಿರುವಾಗ, ಹುದ್ದೆಗಳಲ್ಲಿ ಕುಖ್ಯಾತಿ ಪಡೆದರೂ ಬಡ್ತಿ ಪಡೆಯುವುದರಲ್ಲಿ ಆಶ್ಚರ್ಯವಿದೆಯಾ?

Mar 8, 2009

ಎಲ್ಲ ಮಾಧ್ಯಮದವರಿಗೆ ಬೇಕು ನೈತಿಕತೆ ಮತ್ತು ರಾಷ್ಟ್ರೀಯತೆ


ರಾಷ್ಟ್ರೀಯ ಸುದ್ಧಿವಾಹಿನಿಗಳ ಬಹುತೇಕ ಚಂದಾದಾರರಿಗೆ ಹುತಾತ್ಮನಾದ ಉನ್ನಿಕೃಷ್ಣನ್ ಗೊತ್ತಿಲ್ಲದಿದ್ದರೂ 'ಪ್ರಮೋದ್ ಮುತಾಲಿಕ್ ' ಗೊತ್ತೇಯಿರುತ್ತಾರೆ. ಆ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ, ರಾಷ್ಟ್ರೀಯ ಮಟ್ಟದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿದ್ದಾರೆ ಪ್ರಮೋದ್ ಮುತಾಲಿಕ್!

ಮಂಗಳೂರಿನಲ್ಲಿ ಪಬ್ ದಾಳಿ ನಡೆಯುತ್ತಿದೆ ಎಂದು ತಿಳಿದ ಮರುಕ್ಷಣದಲ್ಲೇ ತಮ್ಮ ಸಕಲ ಸಿದ್ದತೆಗಳೊಂದಿಗೆ ಧಾವಿಸಿದ ಪತ್ರಕರ್ತರು, ಮಾಧ್ಯಮದವರು ತಮ್ಮ 'ಬಿಜೆಪಿ ವಿರೋಧೀ' ನಿಲುವಿನ ಸಮರ್ಥನೆಗೆ ಉತ್ತಮ ವಿಷಯ ಸಿಕ್ಕಿತು ಎಂಬ ವಿಕೃತ ಸಂತೋಷದಿಂದ ದಾಳಿಯನ್ನು ರಾಷ್ಟ್ರೀಯ ಸುದ್ದಿಯನ್ನಾಗಿಸಿದರು. ಮುತಾಲಿಕ್ ಗೆ ಅತ್ಯಂತ ಅಬ್ಬರದ ಪ್ರಚಾರ ನೀಡಿ ಅವರನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿಯನ್ನಾಗಿಸಿದರು. ಹಾಗು ವಿವಾದವನ್ನು ಅಂತರರಾಷ್ಟ್ರೀಯ ಮಟ್ಟಕ್ಕೂ ತೆಗೆದುಕೊಂಡು ಹೋಗುವ ಅತ್ಯಂತ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿದರು!

ಈ ರೀತಿಯಲ್ಲಿ ನಮ್ಮ ದೇಶದ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಕೇವಲ ಹತ್ತನೇ ತರಗತಿಯವರೆಗೆ ಓದಿದ ಸಾಮನ್ಯ ವಿದ್ಯಾರ್ಥಿಯೂ ಕೂಡ ಯಾವುದೇ ಪತ್ರಿಕೆಯನ್ನ ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಪತ್ರಿಕೆಯನ್ನ ಓದಿದ ತಕ್ಷಣವೇ ಹೇಳಬಲ್ಲ, ಪತ್ರಿಕೆ ಯಾವ ಪಕ್ಷದ ಪ್ರತಿನಿಧಿ ಎಂದು!

ವರದಿ ನಿಡುವ ಮೊದಲು ತಾನು ನೀಡುವ ವರದಿ ಸಮಾಜಕ್ಕೆ ಹಿತಕಾರಿಯೋ ಅಲ್ಲವೋ ಎಂದು ಯೋಚಿಸುವ ಅಥವಾ ಪೂರ್ಣ ಸತ್ಯವನ್ನೇ ತನ್ನ ನಿಲುವಾಗಿಸಿಕೊಂಡ ಪ್ರಾಮಾಣಿಕ ಪತ್ರಕರ್ತರ ಅವಶ್ಯಕತೆ ಈ ಸಮಾಜಕ್ಕೆ ಖಂಡಿತ ಇದೆ. ತಾನು ಬರೆಯುವ ಲೇಖನದ ಹಿಂದೆ ಉತ್ತಮ ಸಮಾಜ ನಿರ್ಮಾಣದ ಉದ್ದೇಶವಿಲ್ಲದ ಪತ್ರಕರ್ತ ಹೇಗೆ ತಾನೇ ದೇಶದ ಆಸ್ತಿಯಾಗುತ್ತಾನೆ?

ತನ್ನ ವೃತ್ತಿಯಲ್ಲಿ ನೈತಿಕತೆ ಹಾಗೂ ಪ್ರಾಮಾಣಿಕ, ಉಜ್ವಲ ರಾಷ್ಟ್ರೀಯತೆಯ ಅಭಿವ್ಯಕ್ತಿಯಿಂದ ಮಾತ್ರ ಪತ್ರಕರ್ತರು ಸುಧ್ರುಢ ರಾಷ್ಟ್ರ ನಿರ್ಮಾಣದ ಮಹತ್ಕಾರ್ಯದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಲು ಸಾಧ್ಯ.

ರಾಷ್ಟ್ರದ ಸತ್ಪ್ರಜೆಯಾಗದ ಹೊರತು ಸತ್ಪತ್ರಕರ್ತನಾಗಲು ಸಾಧ್ಯವಿಲ್ಲ.